ಅಂಕಣ

ಭಾರತ  ಮತ್ತು ಇಸ್ರೇಲ್- ಇಟ್ ಟೇಕ್ಸ್ ಟೂ ಟು ಟ್ಯಾಂಗೋ

ಇಸ್ರೇಲ್ ಒಂದು ಸ್ವತಂತ್ರ ದೇಶವಾದದ್ದು ೧೪-೦೫-೧೯೪೮ರಂದು. ರೋಮನ್ನರು ಹೊರದಬ್ಬಿದ ತಮ್ಮ ತಾಯ್ನಾಡಿಗೆ ಮರಳಬೇಕೆಂಬ  ೨೦೦೦ ವರ್ಷಗಳ ಯಹೂದಿಗಳ ಆಶಯ ಕೈಗೂಡಿತ್ತು. ಮೊದಲನೇಯ ಮಹಾಯುದ್ಧದ ನಂತರ ಬ್ರಿಟೀಷರ ನಿಯಂತ್ರಣಕ್ಕೊಳಪಟ್ಟಿದ್ದ ಪ್ಯಾಲೆಸ್ಟೈನ್-ನಲ್ಲಿ ವಾಸಿಸುತ್ತಿದ್ದ ಅರಬ್-ರು ಮತ್ತು ಯಹೂದಿಗಳ ನಡುವಣ ವಿರಸ ಹೆಚ್ಚಾಗಿ ತಿಕ್ಕಾಟಕ್ಕೆ ಕಾರಣವಾಗಿತ್ತು. ಈ ಭೂಮಿಯೊಂದಿಗಿನ  ಸಾವಿರಾರು ವರ್ಷಗಳ ಕಾಲ ಐತಿಹಾಸಿಕ, ಧಾರ್ಮಿಕ ಮತ್ತು ಭಾವನಾತ್ಮಕ  ಸಂಬಂಧ  ಹೊಂದಿದ ಯಹೂದಿಗಳಿಗೆ, ದೇವರು ತಮಗಾಗಿಯೇ  ಭೂಮಂಡಲದ ಈ ಭಾಗವನ್ನು ನಿರ್ಮಿಸಿದ್ದಾನೆ ಎಂಬ ಬಲವಾದ ನಂಬಿಕೆ ಇತ್ತು. ಎರಡನೇಯ ಮಹಾಯುದ್ಧಲ್ಲಿ ಯುರೋಪನಲ್ಲಿ ಯಹೂದಿಗಳ ಮಾರಣಹೋಮ, ಜರ್ಮನ್-ರ  ಕಿರುಕುಳ, ಅವರ ಸಂಕಲ್ಪನ್ನು ಮತ್ತಷ್ಟು ಧೃಢಗೊಳಿಸಿದ್ದವು. ತದನಂತರ ಜಗತ್ತಿನ ವಿವಿಧ ಭಾಗಗಳಿಂದ ವಲಸೆ ಬಂದ ಯಹೂದಿಗಳು (ಜ್ಯೂವ್ಸ್) ತಾಯ್ನಾಡಿನ ಕನಸಿಗೆ ಹಾತೊರೆದು ಕಾದಿದ್ದರು. ನವಂಬರ -೨೯ ೧೯೪೭ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗೀಕರಿಸಿದ ನಿರ್ಣಯದಂತೆ ಪ್ಯಾಲೆಸ್ಟೈನ್-ನ್ನು ವಿಭಜಿಸಿ ಅರಬ್-ರಿಗೆ  ಮತ್ತು  ಯಹೂದಿಗಳಿಗೆ ಪ್ರತ್ಯೇಕ ರಾಷ್ಟ್ರಗಳನ್ನು ನಿರ್ಮಿಸಲಾಯಿತು. ಅಂತಾರಾಷ್ಟ್ರೀಯ ಸಮುದಾಯದ ಈ ನಿರ್ಣಯವನ್ನು ಅರಬ್-ರು ವಿರೋಧಿಸಿದ್ದರು.

ಭೌಗೋಳಿಕವಾಗಿ ಇಸ್ರೇಲ್ ಮಧ್ಯಪ್ರಾಚ್ಯದ ಮಧ್ಯಭಾಗದಲ್ಲಿ ಮೆಡಿಟರೇನಿಯನ್ ಸಮುದ್ರದ ಪೂರ್ವ ತುದಿಯಲ್ಲಿದೆ. ಇದರ ದಕ್ಷಿಣದ ತುದಿ ಕೆಂಪು ಸಮುದ್ರವನ್ನು ತಲುಪುತ್ತದೆ, ಪಶ್ಚಿಮಕ್ಕೆ ಈಜಿಪ್ಟ್, ಪೂರ್ವದಲ್ಲಿ  ಜೋರ್ಡಾನ್. ಉತ್ತರದಲ್ಲಿ ಲೆಬನಾನ್  ಮತ್ತು ಈಶಾನ್ಯದಲ್ಲಿ  ಸಿರಿಯಾದಿಂದ ಸುತ್ತುವರೆದಿದೆ. ವಿಶ್ವಸಂಸ್ಥೆಯ ನಿರ್ಣಯವನ್ನು ವಿರೋಧಿಸಿ ನೆರೆಯ ಅರಬ್ ರಾಷ್ಟ್ರಗಳು ಇಸ್ರೇಲ್-ನೊಂದಿಗೆ ಯುದ್ಧಕ್ಕಿಳಿದು  ತಿಂಗಳುಗಳ ತೀವ್ರ ಸೆಣಸಾಟದ ತರುವಾಯ ಯುದ್ಧವಿರಾಮಕ್ಕೆ ಒಪ್ಪಿದವು. ಇಸ್ರೇಲ್ ಅದಾಗಲೇ ಈ ವಿರೋಧಿ ರಾಷ್ಟ್ರಗಳ ಬೆವರಿಳಿಸಿತ್ತು. ಇಸ್ರೇಲ್ ತನ್ನ ಜನತೆಯ ಸಾಮರ್ಥ್ಯ , ತಾಂತ್ರಿಕ ನಿಪುಣತೆ ಮತ್ತು ಕಠಿಣ ಪರಿಶ್ರಮದಿಂದ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ,ದೈತ್ಯ ಮಿಲಿಟರಿ ಶಕ್ತಿಯಾಗಿ, ವಿಶ್ವ ವಿಖ್ಯಾತ ಗೂಢಚಾರ ಸಂಸ್ಥೆ ‘ಮೊಸ್ಸಾದ’ ಸ್ಥಾಪಿಸಿ,   ಪರಮಾಣು ಶಸ್ತ್ರಾಸ್ತ್ರ ಹೊಂದಿದ ದೇಶವಾಗಿ ವಿಕಸಿತವಾಯಿತು.

೧೯೬೭ರಲ್ಲಿ  ನಡೆದ ‘ಸಿಕ್ಸ್ ಡೇ ವಾರ್’ ಎಂದು ಖ್ಯಾತವಾದ ಯುದ್ಧದಲ್ಲಿ ೧೧ ಇಸ್ಲಾಮಿಕ್  ದೇಶಗಳು ಒಟ್ಟಾಗಿ ದಾಳಿ ಮಾಡಿದರೂ, ಕೇವಲ ಆರು ದಿನಗಳಲ್ಲಿ ಯುದ್ಧವನ್ನು ನಿರ್ಣಾಯಕವಾಗಿ ಗೆದ್ದಿತ್ತು ಇಸ್ರೇಲ್. ಇಸ್ರೇಲ್-ನ ಶಕ್ತಿಯ ವಿರಾಟರೂಪ  ವಿಶ್ವಕ್ಕೆ ದರ್ಶನವಾಗಿದ್ದು- ೧೯೭೬ರ  ಇತಿಹಾಸದಲ್ಲೇ ಅತ್ಯಂತ  ಯಶಸ್ವಿ ಒತ್ತೆಯಾಳುಗಳ ವಿಮೋಚನಾ ಕಾರ್ಯಾಚರಣೆ ಎಂದು ಹೆಸರಾದ ‘ಆಪರೇಷನ್ ಥ೦ಡರಬೋಲ್ಟ್’. ೧೩೯ ಪ್ರಯಾಣಿಕರನ್ನು ಹೊತ್ತು ಟೆಲ್-ಅವಿವ್-ಯಿಂದ ಪ್ಯಾರಿಸ್-ಗೆ ಪ್ರಯಾಣಿಸುತ್ತಿದ್ದ  ಏರ್ ಫ್ರಾನ್ಸ್–ನ ವಿಮಾನವನ್ನು  ನಾಲ್ವರು ಭಯೋತ್ಪಾದಕರು ಅಪಹರಿಸಿ ಅಂತಿಮವಾಗಿ ಉಗಾಂಡಾದ ಎಂಟೆಬೆ ಏರಪೋರ್ಟ್-ನಲ್ಲಿ ಇಳಿಸಿದರು. ಉಂಗಾಂಡಾದ ಸರ್ವಾಧಿಕಾರಿ ಇದಿ ಅಮೀನ್ ಬೆಂಬಲ ಈ ಭಯೋತ್ಪಾದಕರಿಗಿತ್ತು. ಫ್ರಾನ್ಸ್ , ಸ್ವೀಡ್ಜರಲ್ಯಾಂಡ್ ಹಾಗೂ ಇನ್ನೂ ಅನೇಕ ದೇಶಗಳ ಜೈಲಿನಲ್ಲಿದ್ದ ಕೆಲ ಉಗ್ರರನ್ನು ಮತ್ತು ಇಸ್ರೇಲಿ ಜೈಲಿನಲ್ಲಿದ್ದ ೪೦ ಉಗ್ರರನ್ನು ಬಿಡುಗಡೆಗೊಳಿಸಬೇಕೆಂಬುದು ಇವರ ಬೇಡಿಕೆಯಾಗಿತ್ತು. ಇಸ್ರೇಲ್ ತನ್ನ ದೇಶದ ಕಾರ್ಯನೀತಿಯಂತೆ    ಯಾವುದೇ ಕಾರಣಕ್ಕೂ  ಉಗ್ರರ ಬೇಡಿಕೆಗಳಿಗೆ ಬಗ್ಗದೇ, ಇಸ್ರೇಲಿನಿಂದ ೫೦೦೦ ಕಿಲೋಮೀಟರ್ ದೂರದಲ್ಲಿದ್ದ ಎಂಟೆಬೆಯಲ್ಲಿನ ಒತ್ತೆಯಾಳುಗಳಾಗಿದ್ದ ಇಸ್ರೇಲಿ ಪ್ರಜೆಗಳನ್ನು ಕಮಾಂಡೋ ಆಪರೇಷನ್ ಮುಖಾಂತರ ಬಂಧಮುಕ್ತಗೊಳಿಸಿ ಇಸ್ರೇಲಿಗೆ ಕರೆತರುವ ಯಾರು ಊಹಿಸಲು ಸಾಧ್ಯವಿರದ ಕಾರ್ಯಾಚರಣೆಯ ರೂಪರೇಷೆಯನ್ನು ಸಿದ್ಧಪಡಿಸಿತ್ತು!! ಸ್ವಾಭಿಮಾನಿ ಇಸ್ರೇಲ್ ಜಗತ್ತೇ ಬೆರಗಾಗುವಂತೆ ಅತ್ಯಂತ ನಿಖರವಾಗಿ ಈ ಸಾಹಸಿ ಕಾರ್ಯಾಚರಣೆಯನ್ನು ಕೈಗೊಂಡು ಉಗ್ರರ ಅಟ್ಟಹಾಸದ ಹುಟ್ಟಡಗಿಸಿತ್ತು. ಈ ಕಾರ್ಯಾಚರಣೆಯಲ್ಲಿ ೧೦೩ ಪ್ರಯಾಣಿಕರನ್ನು ರಕ್ಷಿಸಲಾಯಿತು. ಆದರೆ ೧೯೭೬ರ ಜುಲೈ-೪-ರಂದು  ಈಗಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹೂರ ಹಿರಿಯ ಸಹೋದರ, ಈ ಕಾರ್ಯಾಚರಣೆಯ ಕಾರ್ಯತಂತ್ರದ ರುವಾರಿಯಾಗಿದ್ದ  ಕಮಾಂಡರ್ ಯೋನಾಥನ್ ನೇತನ್ಯಾಹು ಹಾಗೂ ಮೂವರು ಒತ್ತೆಯಾಳುಗಳು ಮೃತಪಟ್ಟರು. ಈ ಘಟನೆಯ ಮೆಲಕು ಹಾಕಿ ನಮ್ಮ ಪ್ರಧಾನಿ ನರೇಂದ್ರ ಮೋದಿ ತಮ್ಮ ಇಸ್ರೇಲ್ ಭೇಟಿಯ ಮೊದಲ ದಿನ ಇದೇ ಜುಲೈ -೪ರಂದು ಯೋನಾಥನ್ ನೇತನ್ಯಾಹುರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.  

ಅಮೆರಿಕಾದ ಸಂಗೀತ ನಿರ್ದೇಶಕ ಎಲ್.ಹಾಫಮನ್  ಹಾಗೂ ರಷಿಯಾ ಸಂಜಾತ ಅಮೆರಿಕನ್ ಲೇಖಕ  ಡಿಕ್ ಮೆರಿನ್-ರ ಕೆಲ ಸಾಲುಗಳು ಹೀಗಿವೆ, “ಯು ಕ್ಯಾನ್ ಸೇಲ್ ಇನ್ ಎ ಶಿಪ್ ಬೈ ಯುವರಸೆಲ್ಫ್ , ಯು ಕ್ಯಾನ್ ಟೇಕ್ ಎ ನ್ಯಾಪ್ ಬೈ ಯುವರಸೆಲ್ಫ್, ದೇರ್ ಆರ್ ಲಾಟ್ಸ್ ಆಫ್ ಥಿಂಗ್ಸ್ ಯು ಕ್ಯಾನ್ ಡು ಬೈ ಯುವರಸೆಲ್ಫ್ ಬಟ್ ಇಟ್ ಟೇಕ್ಸ್ ಟೂ ಟು ಟ್ಯಾಂಗೋ”  ಅಂದರೆ ನೀವು ಒಬ್ಬಂಟಿಯಾಗಿ ನೌಕಾಯಾನ ಮಾಡಬಹುದು,ಒಬ್ಬಂಟಿಯಾಗಿ ಹಾಯಾಗಿ ನಿದ್ರಿಸಬಹುದು ಹಾಗೂ ಒಬ್ಬಂಟಿಯಾಗಿ ಇನ್ನೂ ಸಾಕಷ್ಟು ಕಾರ್ಯಗಳನ್ನು ಮಾಡಬಹುದು, ಆದರೆ ಟ್ಯಾಂಗೋ ನೃತ್ಯ ಮಾಡಲು ಮಾತ್ರ ಇಬ್ಬರು ಬೇಕೆ ಬೇಕು. ಟ್ಯಾಂಗೋ ಒಂದು ಪ್ರಸಿದ್ಧ ನೃತ್ಯ ರೂಪ , ಇದು ಸಂತೋಷ ಉಲ್ಲಾಸ ಮತ್ತು ಉತ್ಸವದ ಪ್ರತೀಕ. ‘ಟೂ ಟು ಟ್ಯಾಂಗೋ’-ನಂತೆಯೇ ನೆರೆಯ ರಾಷ್ಟ್ರಗಳ ತರಬೇತಿ, ಹಣಕಾಸು ಹಾಗೂ ಕುಮ್ಮಕ್ಕಿನಿಂದ ನೆಲೆನಿಂತ ಭಯೋತ್ಪಾದನೆಯ ಪಿಡುಗನ್ನು ಮಟ್ಟಹಾಕಲು ಇಸ್ರೇಲ್ ಮತ್ತು ಭಾರತ ಒಂದಾಗುವದು ಅವಶ್ಯಕ ಮತ್ತು ಅನಿವಾರ್ಯ. ಪಾಕ್ ಪ್ರಾಯೋಜಿತ ಜೆಹಾದಿ ಭಯೋತ್ಪಾದಕರೊಂದಿಗೆ ಹೊರಾಡುತ್ತಿರುವ ಭಾರತಕ್ಕೂ, ವಿಷಮ ಪರಿಸ್ಥಿತಿಯಲ್ಲಿ ಹಮಾಸ್ ಉಗ್ರರೊಂದಿಗೆ ಹೊರಾಡುತ್ತಿರುವ ಇಸ್ರೇಲಗೂ ಬಹಳಷ್ಟು ಸಾಮ್ಯತೆ ಇದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ  ಎರಡೂ ರಾಷ್ಟ್ರಗಳ ಪಾಲುದಾರಿಕೆ , ಸಹಭಾಗಿತ್ವ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಲಿದೆ. ಅತ್ಯಾಧುನಿಕ ಇಸ್ರೇಲಿ ತಂತ್ರಜ್ಞಾನ ಭಾರತದ ಪಾಲಿಗೆ ಅನೇಕ ರೀತಿಯಲ್ಲಿ ವರದಾನವಾಗಲಿದೆ. ಜೋರ್ಡಾನಗೆ ಹೊಂದಿದ ಇಸ್ರೇಲಿನ ಗಡಿಯನ್ನು ಕಾಯಲು ಇಸ್ರೇಲ್ ವಿನೂತನ ಮಾದರಿಯ ರೋಬೋಟ್-ಗಳನ್ನು ಬಳುಸುತ್ತಿದೆ, ಉನ್ನತ ತಾಂತ್ರಿಕತೆಯುಳ್ಳ ಕ್ಯಾಮೆರಾಗಳಿಂದ ನುಸುಳುಕೋರರನ್ನು ಪತ್ತೆ ಹಚ್ಚಿ ರಿಯಲ್–ಟೈಮ್ ಮಾಹಿತಿಯನ್ನು ಮುಖ್ಯ ನಿಯಂತ್ರಣ ಕಕ್ಷಕ್ಕೆ ರವಾನಿಸುತ್ತದೆ. ಮಾಹಿತಿ ತಲುಪಿದ ಕ್ಷಣಾರ್ಧದಲ್ಲಿ ಇಸ್ರೇಲಿ ಸೇನೆ ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗುತ್ತದೆ. ಇಂತಹದೊಂದು ತಂತ್ರಜ್ಞಾನದ ಪ್ರಯೋಗ ಕಾಶ್ಮೀರದಲ್ಲಿ ನುಸುಳುವ ಉಗ್ರರನ್ನು ಮಟ್ಟಹಾಕಲು ಅವಶ್ಯಕವೆನಿಸುವದಿಲ್ಲವೇ? ಇಸ್ರೇಲ್ ಎಂತಹ ಸಂದರ್ಭದಲ್ಲಿಯೂ  ಭಾರತದ ಜೊತೆ ನಿಲ್ಲುವ ಭರವಸೆಯ ರಾಷ್ಟ್ರ. ಹಿಂದೊಮ್ಮೆ ಇಸ್ರೇಲ್ ಪಾಕಿಸ್ತಾನದ ಪರಮಾಣು ಘಟಕವಾದ ಖೌತಾದ ಮೇಲೆ ದಾಳಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು, ಭಾರತವನ್ನು  ಕೇವಲ ತನ್ನ ವಿಮಾನಗಳಿಗೆ ಮರು ಇಂಧನ (ರೀಫ್ಯೂಯೆಲ್) ವದಗಿಸುವಂತೆ ಕೇಳಿತ್ತಂತೆ!! ಆದರೆ ಕಾರಣಾಂತರಗಳಿಂದ ಭಾರತ ಇದಕ್ಕೆ ಸಮ್ಮತಿಸಿರಲಿಲ್ಲ!

ಇನ್ನು ಮರಭೂಮಿಯಲ್ಲಿಯೂ ಸ್ವಾವಲಂಬಿಯಾಗಿ ತನ್ನದೇ ಆದ ವಿಶಿಷ್ಟ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿ, ಜಗತ್ತೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ ಇಸ್ರೇಲ್. ತನ್ನ ತಾಂತ್ರಿಕತೆಯ ಸಹಾಯದಿಂದ ತೋಟಗಾರಿಕೆ ಮತ್ತು ಕೃಷಿಯ ವಿನೂತನ ಮಾದರಿಗಳನ್ನು ಅನುಸರಿಸಿ, ಹನಿ ನೀರಾವರಿ ಮುಖಾಂತರ ಮರಭೂಮಿಯಲ್ಲಿ ಕೃಷಿ ಮಾಡುವಲ್ಲಿ ಪರಿಣಿತಿ ಹೊಂದಿದ ದೇಶಗಳಲ್ಲಿ  ಮುಂಚೂಣಿಯಲ್ಲಿರುವ  ರಾಷ್ಟ್ರ ಇಸ್ರೇಲ್. ತನ್ನಲ್ಲಿರುವ ಖನಿಜಗಳಿಂದಾಗಿ ಯಾರನ್ನು ಮುಳಗಲು ಬಿಡದ, ಚರ್ಮ ರೋಗ ನಿವಾರಕ ಔಷಧಿ ಗುಣಗಳನ್ನು ಹೊಂದಿದ  ಮೃತಸಾಗರದ (ಡೆಡ್ ಸೀ) ಬೀಚನ  ಸುತ್ತಮುತ್ತ ಹುಲ್ಲಿನ ಹಸಿರುಹಾಸನ್ನು ಬೆಳೆಸೀದ ಕೀರ್ತಿ ಇಸ್ರೇಲಿನದು. ಪ್ರತಿವರ್ಷ ೧ ಮೀಟರನಷ್ಟು ಕರಗುತ್ತಿರುವ ಮೃತಸಾಗರವನ್ನು ಪಾರಂಪರಿಕ ಸಾಂಸ್ಕೃತಿಕ ಧರೋವರವೆಂದು ಘೋಷಿಸಿ, ಅದರ ಉಳಿವಿಗಾಗಿ ಇಸ್ರೇಲಿ ಸರಕಾರ ಟೊಂಕಕಟ್ಟಿ ನಿಂತಿದೆ. ಜೋರ್ಡಾನ್-ನೊಂದಿಗೆ ಕೆಂಪು ಸಮುದ್ರದಿಂದ ಜೋರ್ಡಾನ್ ಮುಖಾಂತರ ಮೃತ ಸಾಗರಕ್ಕೆ ನೀರು ಹರಿಸುವ ಕಾಲುವೆ ನಿರ್ಮಿಸಲು ಒಪ್ಪಂದ ಮಾಡಿಕೊಂಡಿದೆ.   

ಕೆಲವೇ ತಿಂಗಳುಗಳ ಅಂತರದಲ್ಲಿ  ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ  ಭಾರತ ಮತ್ತು ಇಸ್ರೇಲ್ ಸುಮಾರು ನಲವತ್ತು ದಶಕಗಳ ಕಾಲ ವಿಭಿನ್ನ ದಿಕ್ಕಿನ್ನಲ್ಲೆ ಸಾಗಿದವು.  ದಿವಂಗತ ನರಂಸಿಹರಾವ್ ಪ್ರಧಾನಿಯಾಗಿದ್ದಾಗ ೧೯೯೨ರಲ್ಲಿ ಭಾರತ ಮತ್ತು ಇಸ್ರೇಲ್ ನಡುವಣ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲಯಾಯಿತು. ನಂತರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವು ಆರ್ಥಿಕ, ಮಿಲಿಟರಿ, ಕೃಷಿ ಮತ್ತು ರಾಜಕೀಯ ಮಟ್ಟದಲ್ಲಿ ಹಂತ ಹಂತವಾಗಿ ವಿಕಸನಗೊಂಡಿತು. ಬಹುಕಾಲ ಭಾರತೀಯ ಆಂತರಿಕ ‘ಓಲೈಕೆಯ ವೋಟ್ ಬ್ಯಾಂಕ್’ ರಾಜಕಾರಣವು ಇಸ್ರೇಲಿನೊಂದಿಗೆ ಅಪೇಕ್ಷಿತ ಸಂಬಂಧ ಹೊಂದಲು ತೊಡಕಾಗಿತ್ತು.೧೯೯೯ರ ಕಾರ್ಗಿಲ್ ಯುದ್ಧದ ಸಮಯದಲ್ಲಿಯೂ ಇಸ್ರೇಲ್ ಭಾರತಕ್ಕೆ ಅಭಯ ಹಸ್ತ ಚಾಚಿತ್ತು.  ನವೆಂಬರ್ 2002 ರಲ್ಲಿ ಇಸ್ರೇಲ್ ಮತ್ತು ಭಾರತ  ಬಾಹ್ಯಾಕಾಶ ಸಂಶೋಧನಾ  ಕ್ಷೇತ್ರದಲ್ಲಿ ಸಹಕರಿಸುವ ಒಪ್ಪಂದಕ್ಕೆ ಸಹಿ ಹಾಕಿದವು. 2006ರಲ್ಲಿ ಭಾರತ ಮತ್ತು ಇಸ್ರೇಲ್ ಕೃಷಿ ಕ್ಷೇತ್ರದಲ್ಲಿ ದೀರ್ಘಕಾಲಿಕ ಸಹಯೋಗದ ಕುರಿತು ಒಪ್ಪಂದಕ್ಕೆ ಸಹಿ ಹಾಕಿದವು.  20೦0ರದ ನಂತರ ಭದ್ರತೆ ಮತ್ತು ರಕ್ಷಣಾ ವಿಭಾಗದಲ್ಲಿ ಇಸ್ರೇಲ್ ಜೊತೆಗಿನ ವ್ಯಾಪಾರ- ಬಾಂಧವ್ಯ ಬಹುವಾಗಿ ಬೆಳೆಯಿತು. ಪ್ರತಿಕೂಲ (ವೈರಿ)  ವಿಮಾನಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಇತರ ಒಳನುಳುಸುವ  ವೈಮಾನಿಕ ಬೆದರಿಕೆಯನ್ನು ಯಾವುದೇ ಭೂ–ಆಧಾರಿತ ರಡಾರ್-ಗಳಿಗಿಂತ ಮೊದಲೇ  ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದ ಅತ್ಯಾಧುನಿಕ  ಫಲ್ಕಾನ್ ವಾಯುವಾಹಿತ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ  (ಏರ್ ಬೋರ್ನ್ ವಾರ್ನಿಂಗ್ ಐಂಡ್ ಕಂಟ್ರೋಲ್ ಸಿಸ್ಟಮ್ಸ-AWCS),ಎಕ್ಸ್ -೯೫ ರೈಫಲ್-ಗಳು, ಆಧುನಿಕ ರಡಾರ್-ಗಳನ್ನು   ಭಾರತ ಖರೀದಿಸಿ ರಕ್ಷಣಾ ಕ್ಷೇತ್ರದಲ್ಲಿ ಇಸ್ರೇಲಗೆ ದೊಡ್ಡ ಮಾರುಕಟ್ಟೆಯಾಯಿತು. ೨೦೧೨ರಲ್ಲಿ ಆಗಿನ ವಿದೇಶ ಸಚಿವರಾಗಿದ್ದ ಎಸ್.ಎಂ.ಕೃಷ್ಣರ ಇಸ್ರೇಲಿಗೆ ಭೇಟಿ ಇತ್ತು ಭಯೋತ್ಪಾದನೆಯ ವಿರುದ್ಧ ಹೊರಾಟದಲ್ಲಿ ಪರಸ್ಪರ ಸಹಕರಿಸುವ ಮತ್ತು ಪ್ರತ್ಯರ್ಪಣದ ಒಡಬಂಡಿಕೆಗೆ ಸಹಿ ಹಾಕಿದರು. ಇದುವರೆಗೆ ಭಾರತದ ಯಾವುದೇ ನಾಯಕರು ಇಸ್ರೇಲಿಗೆ ಭೇಟಿ ಕೊಟ್ಟರೂ, ಪ್ಯಾಲೆಸ್ಟೈನ್-ಗೂ ಭೇಟಿ ಕೊಡುತ್ತಿದ್ದರು. ೨೦೧೫ರ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ  ಭೇಟಿ ಮತ್ತು ೨೦೧೬ರ ವಿದೇಶ ಸಚಿವೆ ಸುಷ್ಮಾ ಸ್ವರಾಜ್-ರ ಭೇಟಿಯೂ ಇದಕ್ಕೆ ಹೊರತಾಗಿರಲಿಲ್ಲ,

ಪ್ರಧಾನಿ ಮೋದಿಯವರ ಇತ್ತೀಚಿನ ಇಸ್ರೇಲ್ ಭೇಟಿ ಐತಿಹಾಸಿಕ ಮತ್ತು ದಿಟ್ಟ ಹೆಜ್ಜೆಯಾಗಿತ್ತು, ಭಾರತೀಯ ಪ್ರಧಾನಿಯೋರ್ವರ ಮೊದಲ ಭೇಟಿ ಇದಾಗಿತ್ತು. ಇಸ್ರೇಲ್-ನ ಪ್ರಧಾನಿ ಬೆಂಜಮಿನ್ ನೇತನ್ಯಾಹು    ಶಿಷ್ಟಾಚಾರವನ್ನು ಬದಿಗೊತ್ತಿ ತಾವೇ ಖುದ್ದಾಗಿ ನಮ್ಮ ಪ್ರಧಾನಿಗೆ  ಅಭೂತಪೂರ್ವ ಸ್ವಾಗತ ಕೋರಿದ್ದರು. ಬಹುತೇಕ ವಿಶ್ಲೇಷಕರು ಗಮನಿಸದ ಸಂಗತಿಯೆಂದರೆ (ಅಥವಾ ಉದ್ದೇಶಪೂರ್ವಕವಾಗಿಯೇ ಮರೆತರೋ…..) ಬೆಂಜಮಿನ್  ನೇತನ್ಯಾಹು ನಮ್ಮ ಪ್ರಧಾನಿಯನ್ನು ‘ವರ್ಲ್ಡ್ ಲೀಡರ್’ ಎಂದು ಸಂಬೋಧಿಸಿದ್ದು! ಅಮೇರಿಕದ ಅಧ್ಯಕ್ಷರಿಗೆ,ಧರ್ಮಗುರು ಪೋಪ್-ರಿಗೆ ದೊರೆಯುವ ರೀತಿಯ ಅದ್ದೂರಿ ಸ್ವಾಗತ ಬದಲಾಗುತ್ತಿರುವ ವಿಶ್ವಕ್ಕೆ ದಿಕ್ಸೂಚಿಯಾಗಿದೆ.  ಭಾರತ –ಇಸ್ರೇಲ್ ಮಧ್ಯೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಜಲ ಸಂರಕ್ಷಣೆ,ರಕ್ಷಣಾ ವಲಯದ ಅನೇಕ ಒಡಂಬಡಿಕೆಗಳು ಏರ್ಪಟ್ಟವು. ಪ್ರಧಾನಿಯ ಈ ಭೇಟಿಯ ಫಲಶ್ರುತಿಯಿಂದ ಭಾರತಕ್ಕೆ ಬಾರಕ್ ಕ್ಷಿಪಣಿಗಳು, ಅತ್ಯಾಧುನಿಕ ಕಣ್ಣ್ಗಾವಲು ಡ್ರೋನ್-ಗಳು ದೊರಕುತ್ತಿವೆ.  ಮುಂಬೈನ ನಾರಿಮನ್ ಹೌಸ್-ನ  ಯಹೂದಿ ಕೇಂದ್ರದ ಮೇಲೆ  2008 ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದ ಮಗು ಮಸೀದ ಮೋಶೆ ಹೋಲ್ಬರ್ಗ್-ನ್ನು ಮೋದಿ  ಭೇಟಿಯಾದರು. ಪ್ರಧಾನಿಯ ಇಸ್ರೇಲ್ ಭೇಟಿಯನ್ನು ದೇಶದ ಕೆಲ ತಥಾ ಕಥಿತ ಬುದ್ಧಿ ಜೀವಿಗಳು,ಎಡಪಂಥೀಯ ಟೊಳ್ಳು ಜ್ಯಾತ್ಯಾತೀತವಾದಿಗಳು    ಹುಬ್ಬೇರೆಸಿ ಪ್ರಶ್ನಿಸಿದರು…. ಏಕೆಂದರೆ ಅವರು ಇಸ್ರೇಲ್-ಗೆ ಹೋದ ಸಂದರ್ಭದಲ್ಲಿ  ಪ್ಯಾಲಸ್ಟೈನಗೆ ಭೇಟಿ ನೀಡಲಿಲ್ಲ! ಈ ಜನ ಮೇ-2017ರ ಪ್ಯಾಲಸ್ಟೈನ ಅಧ್ಯಕ್ಷ ಮೆಹಮೂದ್ ಅಬ್ಬಾಸ್-ರ ಭಾರತ ಭೇಟಿಯನ್ನು ಉಲ್ಲೇಖಿಸುವದನ್ನು ಮರೆತರು. ಪ್ರಧಾನಿ ಮೋದಿಯ ಚಾಣಕ್ಯ ತಂತ್ರದ  ವಿದೇಶ ನೀತಿಯ ಯಶಸ್ಸಿಗೆ   ಭಾರತದ ಕುರಿತು ವಿವಿಧ ರಾಷ್ಟ್ರಗಳ ಬದಲಾದ/ಬದಲಾಗುತ್ತಿರುವ  ದೃಷ್ಟಿಕೋನ-ಧೋರಣೆಯೇ ಸಾಕ್ಷಿ. ಇಂದಿಗೂ ೭೯%ರಷ್ಟು ಭಾರತೀಯರು ಪ್ರಧಾನಿ ಮೋದಿಯ ದಿಟ್ಟ ನಾಯಕತ್ವವನ್ನು ಮುಕ್ತ ಮನಸ್ಸಿನಿಂದ ಒಪ್ಪಿ ಇಷ್ಟಪಡುತ್ತಾರೆ೦ದಾದರೆ ಮೋದಿಜಿಯ ವಿದೇಶ ನೀತಿಯು ಒಂದು ಕಾರಣ. ಭಾರತ ಮತ್ತು ಇಸ್ರೇಲ್-ನ ‘ಟೂ ಟು ಟ್ಯಾಂಗೋ’ ಸ್ನೇಹ ಸ೦ಬಂಧ ಇನ್ನಷ್ಟು ಗಟ್ಟಿಗೊಂಡು  ಸಮೃದ್ಧ, ಭಯೋತ್ಪಾದಕತೆ ಮುಕ್ತ ಜಗತ್ತಿನ ನಿರ್ಮಾಣದತ್ತ ದಾಪುಗಾಲು ಹಾಕಲಿ.      

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!