ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತತ್ವ ಸಂಶೋಧನೆಗೆ ದೂರಸಂವೇದಿ

ವಿಜ್ಞಾನ ಲೋಕದಿಂದ
Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಒಂದು ಸಮಾಧಿಯೋ ಅಥವಾ ಗೋಡೆಯ ಅವಶೇಷವೋ ಭೂಮಿಯೊಳಗೆ ಇದ್ದರೆ, ಅದರ ಮೇಲೆ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹೆಚ್ಚು ಸಾಂದ್ರವಲ್ಲದ ದುರ್ಬಲ ಸಸ್ಯವರ್ಗ ಹೊಂದಿರುತ್ತದೆ. ಇನ್ನು ಇದೇ ರೀತಿ ಬೇರೆ ಬಗೆಯ ಭೂಬಳಕೆಯನ್ನು ದೂರಸಂವೇದಿ ಚಿತ್ರಗಳಿಂದ ಗುರುತಿಸಬಹುದಾಗಿದೆ.

ಪುರಾತತ್ವದ ಬಗ್ಗೆ ಶೋಧನೆ ಎಂದ ಕೂಡಲೇ ಪಾಳುಬಿದ್ದ ಪ್ರದೇಶದಲ್ಲಿ ಏನಾದರೂ ಹುಡುಕಬೇಕು ಅಥವಾ ಹಂಪಿ–ಬಾದಾಮಿ–ಐಹೊಳೆ–ಪಟ್ಟದಕಲ್ಲು ಪ್ರದೇಶಗಳಲ್ಲಿ ಪುರಾತನ ಕಾಲದ ಮಾಹಿತಿ ಏನಾದರೂ ದೊರೆಯುವುದೇ ಎಂದು ಅನ್ವೇಷಿಸಬೇಕು ಎಂಬ ಕಲ್ಪನೆ ಮೂಡುತ್ತದೆ. ಪುರಾತತ್ವ ಶಾಸ್ತ್ರ ನಮ್ಮ ಮನುಕುಲದ ಇತಿಹಾಸವನ್ನು ತಿಳಿಯಲು ನೆರವಾಗುತ್ತದೆ. ಇದರ ಅನ್ವಯ ಪುರಾತತ್ವ ತಜ್ಞರು ಹಲವು ಬಾರಿ ನಿರ್ಜನ ಪ್ರದೇಶಗಳಲ್ಲಿ ಬಿಸಿಲು-ಮಳೆಗೆ ಮೈಯೊಡ್ಡಿ ತಮ್ಮ ಕಾರ್ಯ ನಿರ್ವಹಿಸಿರುವುದು ಇಲ್ಲಿಯವರೆಗೂ ತಿಳಿದ ಅವರ ಕಾರ್ಯವೈಖರಿ.

ಆದರೆ, ಇಂದಿನ ಪೀಳಿಗೆಯ ಪುರಾತತ್ವ ತಜ್ಞರು ಉಪಗ್ರಹಗಳಿಂದ ಮಾಹಿತಿಯನ್ನು ಪಡೆದೋ ಅಥವಾ ವಿಮಾನಗಳನ್ನು ಹಾರಿಸಿಯೋ ಅದರಿಂದ ಸೆರೆಹಿಡಿದ ಚಿತ್ರಗಳನ್ನು ಆಧರಿಸಿ ತಮ್ಮ ಸಂಶೋಧನೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ (NIAS)  ಡಾ. ಎಂ.ಬಿ.ರಜನಿ ಮತ್ತು ಅವರ ತಂಡದವರು, ಪುರಾತತ್ವ ಹಾಗೂ ಐತಿಹಾಸಿಕ ರಚನೆಗಳನ್ನು ತಿಳಿಯಲು ಇದೇ ವಿಧಾನಗಳನ್ನು ಬಳಸುತ್ತಿದ್ದಾರೆ. ಉಪಗ್ರಹಗಳು  ಭೂಮಿಯ ಮೇಲ್ಮೈಯಲ್ಲಿರುವ ವಸ್ತುಗಳು ಪ್ರತಿಫಲಿಸುವ ಬೆಳಕನ್ನು ಅಳೆಯುವ ಸಂವೇದಕಗಳನ್ನು ಹೊಂದಿವೆ.

ಈ ಸಂವೇದಕಗಳಿಂದ ಸೆರೆಹಿಡಿದ ಚಿತ್ರಗಳಂತೆ ಇರುವ ಮಾಹಿತಿಯನ್ನು ವಿಶ್ಲೇಷಿಸಿ ಅರ್ಥೈಸಬಲ್ಲ ತಜ್ಞರು,  ಭೂಮಿಯ ವಿವಿಧ ಭೂ ಬಳಕೆಯನ್ನು ಗುರುತಿಸಬಲ್ಲರು. ಅದರಂತೆ ಒಂದು ಪ್ರದೇಶದಲ್ಲಿ ಬೆಟ್ಟ-ಕಾಡು, ಕಟ್ಟಡ, ಹೊಲ-ಗದ್ದೆ, ನದಿ–ಕೆರೆ ಮತ್ತಿತರ ಬಗೆಯ ಭೂ ಬಳಕೆಯ ಇರುವಿಕೆಯನ್ನು ಆ ಪ್ರದೇಶಕ್ಕೆ ಹೋಗದೇ ತಿಳಿಯಬಹುದು. ಅಕಸ್ಮಾತ್ ಯಾವುದಾದರೂ ಪ್ರದೇಶ ಒಮ್ಮೆ ಪುರಾತನ ಕಾಲದ ಅಥವಾ ಸಾವಿರಾರು ವರ್ಷಗಳ ಹಿಂದೆ ಒಂದು ನಾಗರಿಕತೆಯ ಭಾಗವಾಗಿತ್ತು ಎಂದು ಕಲ್ಪಿಸೋಣ.

ಕಾಲ ಕ್ರಮೇಣ ಇದರ ಮೇಲೆ ಮರ-ಗಿಡಗಳು ಬೆಳೆದು ನಿಂತರೆ ನಮಗೆ ಅದರಡಿಯಲ್ಲಿ ಏನಿದೆ ಎಂಬುದು ಹಾಗೆಯೇ ನೋಡಿದರೆ ತಿಳಿಯುವುದಿಲ್ಲ. ಆದರೆ, ಇದನ್ನು ಅದರ ಮೇಲಿರುವ ಸಸ್ಯವರ್ಗಗಳ ಸಾಂದ್ರತೆಯನ್ನು ಆಧರಿಸಿ ದೂರಸಂವೇದಿ ಚಿತ್ರಗಳಿಂದ ಗುರುತಿಸಬಹುದಾಗಿದೆ. ಒಂದು ಸಮಾಧಿಯೋ ಅಥವಾ ಗೋಡೆಯ ಅವಶೇಷವೋ ಭೂಮಿಯೊಳಗೆ ಇದ್ದರೆ, ಅದರ ಮೇಲೆ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹೆಚ್ಚು ಸಾಂದ್ರವಲ್ಲದ ದುರ್ಬಲ ಸಸ್ಯವರ್ಗ ಹೊಂದಿರುತ್ತದೆ.

ಇನ್ನು ಇದೇ ರೀತಿ ಬೇರೆ ಬಗೆಯ ಭೂಬಳಕೆಯನ್ನು ದೂರಸಂವೇದಿ ಚಿತ್ರಗಳಿಂದ ಗುರುತಿಸಬಹುದು. ದೂರಸಂವೇದಿ ತಂತ್ರಜ್ಞಾನದಿಂದ ಸೆರೆಹಿಡಿದ ಚಿತ್ರಗಳು ನಮ್ಮ ಕಣ್ಣುಗಳಿಂದ ಗ್ರಹಿಸಬಲ್ಲದ, ವರ್ಣ ಪಟಲದ ಹೊರಗಿರುವ ಬೆಳಕಾದ ಅತಿಗೆಂಪು ಮತ್ತು ಇತರೆ ಬೆಳಕನ್ನು ಸೆರೆ ಹಿಡಿಯುವ ಸಂವೇದನಾಶೀಲ ಸಾಮರ್ಥ್ಯ ಹೊಂದಿರುತ್ತದೆ. ಇಂತಹ ಪುರಾತತ್ವ ವೈಶಿಷ್ಟ್ಯಗಳನ್ನು ನಿರ್ದಿಷ್ಟವಾಗಿ ಗುರುತಿಸಲು ಭೂವ್ಯೋಮ ಮಾಹಿತಿ ವ್ಯವಸ್ಥೆ (ಜಿಐಎಸ್)ಯನ್ನು ಬಳಸಲಾಗುತ್ತದೆ. 

‘ದೂರಸಂವೇದಿ ತಂತ್ರಜ್ಞಾನ ಮತ್ತು ಭೂವ್ಯೋಮ ಮಾಹಿತಿ ವ್ಯವಸ್ಥೆಯನ್ನು ಬಳಸಿಕೊಂಡು ಮರೆತು ಹೋಗಿರುವ ಪುರಾತತ್ವ ವೈಶಿಷ್ಟ್ಯಗಳನ್ನು ಮತ್ತು ಇಲ್ಲಿಯವರೆಗೂ ಅಪರಿಚಿತವಾಗಿ ಉಳಿದಿರುವ ಐತಿಹಾಸಿಕ ಪ್ರದೇಶಗಳನ್ನು ಗುರುತಿಸಬಹುದು’ ಎಂದು ರಜನಿ ಹೇಳುತ್ತಾರೆ. ‘ಅಷ್ಟು ಮಾತ್ರವಲ್ಲದೆ, ಇಂದು ನಗರೀಕರಣದಿಂದ, ಅಭಿವೃದ್ಧಿ ಇಲ್ಲವೇ ಅಕ್ರಮ ಒತ್ತುವರಿಯಿಂದ  ಇಂತಹ ಪ್ರದೇಶಗಳಿಗೆ ಏನಾದರೂ ತೊಂದರೆಯಾದರೆ ಅದನ್ನೂ ಗುರುತಿಸಬಹುದು. ನಂತರ ಆ ಪ್ರದೇಶದ ಸೂಕ್ತ ನಿರ್ವಹಣೆಗೆ ಬಳಸಬಹುದು’ ಎನ್ನುತ್ತಾರೆ ಅವರು.

ಈ ಸಂಶೋಧಕರ ತಂಡವು, ಹಲವು ಪ್ರಮುಖ ಪುರಾತತ್ವ ಐತಿಹಾಸಿಕ ವ್ಯಾಪ್ತಿಯನ್ನು ಗುರುತಿಸಲು ಸಮೀಕ್ಷೆ ನಕ್ಷೆಗಳು, ಐತಿಹಾಸಿಕ ದಸ್ತಾವೇಜು (ಇಂಥ ವರ್ಣಚಿತ್ರಗಳು ಮತ್ತು ಸಾಹಿತ್ಯ ವಿವರಣೆಗಳು), ದೂರಸಂವೇದಿ ತಂತ್ರಜ್ಞಾನ ಮತ್ತು ಭೂವ್ಯೋಮ ಮಾಹಿತಿ ವ್ಯವಸ್ಥೆಯ ಬಳಸಿದ್ದಾರೆ. ತಮಿಳುನಾಡಿನ ಕರಾವಳಿ ಪಟ್ಟಣವಾದ ಮಹಾಬಲಿಪುರಂಗೆ, ‘ಏಳು ಪಗೋಡಗಳ’ ಪಟ್ಟಣ ಎಂದು ಕರೆಯಲಾಗುತ್ತಿತ್ತು. ಇಲ್ಲಿಯವರೆಗೂ ಇದಕ್ಕೆ ಕಾರಣವೇನು ಎಂಬುದು ನಿಗೂಢವಾಗಿ ಇತ್ತು.

ಆದರೆ ದೂರಸಂವೇದಿ ತಂತ್ರಜ್ಞಾನ ಮತ್ತು ಭೂವ್ಯೋಮ ಮಾಹಿತಿ ವ್ಯವಸ್ಥೆಯನ್ನು ಆಧರಿಸಿ ಸಮುದ್ರತೀರದ ಸುತ್ತ ಮತ್ತು ಹಳೆಯ ಕಡಲ ನಕ್ಷೆಗಳನ್ನು ಹೋಲಿಸಿ ಇವುಗಳ ಇರುವಿಕೆಯನ್ನು ಗುರುತಿಸಲು ಅನುಕೂಲವಾಗಿದೆ. ಶ್ರೀರಂಗಪಟ್ಟಣದ ವ್ಯಾಪ್ತಿಯನ್ನು ಕಂದಕಗಳು ಮತ್ತು ಪ್ರಸಿದ್ಧ ಐತಿಹಾಸಿಕ ರಚನೆಗಳ ಸ್ಥಳಗಳನ್ನು ಅನುಸರಿಸುವ ಮೂಲಕ ಗುರುತಿಸಲಾಗಿದೆ. ಸದ್ಯಕ್ಕೆ ಡಾ.ರಜನಿ ಮತ್ತು ಅವರ ತಂಡವು ಬಿಹಾರದಲ್ಲಿರುವ ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾದ ನಳಂದ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಗುರುತಿಸುವ ಪ್ರಯತ್ನದಲ್ಲಿ ತೊಡಗಿದೆ.

ಈ ವಿಧಾನಗಳು ಪುರಾತತ್ವ ಹಾಗೂ ಐತಿಹಾಸಿಕ ರಚನೆಗಳ ಅನ್ವೇಷಣೆಗೆ ಬಹಳ ಪೂರಕವಾದದ್ದು ಎಂದು ರಜನಿ ಅವರು ಅಭಿಪ್ರಾಯಪಡುತ್ತಾರೆ. ದೂರಸಂವೇದಿ ತಂತ್ರಜ್ಞಾನದಿಂದ ಸೆರೆ ಹಿಡಿದ ಚಿತ್ರಗಳ ವಿಶ್ಲೇಷಣೆಯಿಂದ ಸಾಂಪ್ರದಾಯಿಕ ವಿಧಾನಗಳ ಸಾಮರ್ಥ್ಯವನ್ನು ವೃದ್ಧಿಸಬಹುದು. ಅದರಂತೆ ನಿರ್ದಿಷ್ಟವಾದ ಪ್ರದೇಶಗಳಲ್ಲಿ ಅಧ್ಯಯನಗಳನ್ನು ರೂಪಿಸಲು ಅನುಕೂಲಕರ ಕೂಡ. ಹಾಗಾದರೆ ಈ ವಿಧಾನದಿಂದ ಭೂ ಆಧಾರಿತ ಪುರಾತನ ವಾಸ್ತುಶಾಸ್ತ್ರದ ಅನ್ವೇಷಣೆಗೆ ಅಂತ್ಯವೇ?

ಅದಕ್ಕೆ ರಜನಿ ಅವರು, ‘ದೂರಸಂವೇದಿ ತಂತ್ರಜ್ಞಾನದಿಂದ ಒಂದು ಬಗೆಯ ಮಾಹಿತಿ ದೊರೆತರೆ, ಇನ್ನಿತರ ಪ್ರಶ್ನೆಗಳಿಗೆ ಇದರಿಂದ ಉತ್ತರ ದೊರೆಯುವುದಿಲ್ಲ. ಅದಕ್ಕೆ ಸಾಂಪ್ರದಾಯಿಕ ವಿಧಾನಗಳು ಅತ್ಯವಶ್ಯಕ. ಹಾಗಾಗಿ ಒಂದರಿಂದಲೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಇದಕ್ಕೆ ಇವೆರಡನ್ನೂ ಸಮರ್ಪಕವಾಗಿ ಬಳಸಬೇಕು. ಇದರಿಂದ ಹೊಸ ಪ್ರಶ್ನೆಗಳನ್ನು ಕೇಳಲು ಸಹಾಯವಾಗಬಹುದು’ ಎನ್ನುತ್ತಾರೆ. ಒಂದೆಡೆ ತಂತ್ರಜ್ಞಾನವು ಸಾಂಪ್ರದಾಯಿಕ ವಿಧಾನಗಳಿಗೆ ಪೂರಕ ಆಗಿರುವುದನ್ನು ಅರಿತು ಖುಷಿಯಾದರೆ, ಇನ್ನೊಂದೆಡೆ ಇದರಿಂದ ನಮ್ಮ ಇತಿಹಾಸವನ್ನು ತಿಳಿಯುವ ಪ್ರಾಮುಖ್ಯತೆಯಾದರೂ ಏನು ಎಂಬ ಪ್ರಶ್ನೆ ಮೂಡಿಬರಬಹುದು.

ಪುರಾತನ ನಗರಗಳು ಹೇಗೆ ವೃದ್ಧಿಸಿದವು ಹಾಗೂ ಹೇಗೆ ಅವನತಿ ಕಂಡವು ಎಂದು ಅರಿತರೆ, ಇಂದು ನಮ್ಮ ನಗರಗಳನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಇಂದಿನ ಜನಸಂಖ್ಯೆ, ಜೀವನ ಶೈಲಿ ಎಲ್ಲವನ್ನು ನೋಡಿದರೆ, ಹಿಂದಿನ ಐತಿಹಾಸಿಕ ಪರಿಹಾರಗಳು ಎಷ್ಟು ಸೂಕ್ತವೆನಿಸಿಬಹುದು. ಎಷ್ಟಾದರೂ ಕುತೂಹಲಕಾರಿ ಮನುಷ್ಯರಿಗೆ ನಮ್ಮ ಪ್ರಾಚೀನ ಇತಿಹಾಸದ ಶೋಧನೆಯ ನಿಗೂಢವಾದಂತೆ ರೋಮಾಂಚನಕಾರಿ ಆಗಿದ್ದರಿಂದ ಇದರ ಅನ್ವೇಷಣೆ ಮುಂದುವರಿಯುತ್ತದೆ. 

–ಗುಬ್ಬಿ ಲ್ಯಾಬ್ಸ್‌ (ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT